ಫಿನಸೆಟಿನ್	
ಕೋಲ್‍ಟಾರ್ ಜನ್ಯ. ನೋವಳಿಕ ಜ್ವರಶಾಮಕ ಔಷಧಿಗಳ ಪೈಕಿ ಒಂದು. ಅಸಿಟೋ-ಠಿ-ಫೆನಟೆಡಿನ್ ಪರ್ಯಾಯನಾಮ. ಅಣುಸೂತ್ರ C10H13O2N. ಇದನ್ನು ಕೃತಕವಾಗಿ ಸಂಶ್ಲೇಷಿಸಬಹುದು. ಧಾತು ಘಟಕಗಳಿವು (ಶೇಕಡವಾರು): C 67.02, H 7.31, N 7.82, O 17.85. ಫಿನಸೆಟಿನ್ನಿನಲ್ಲಿ ಅಸಿಟೈಲ್ ಘಟಕ (CH3CO) ಶೇಕಡಾ 24.02, ಫಿನಟಿಡಿನ್ ಘಟಕ ಶೇಕಡ 75.98 ಇವೆ.

	ಫಿನಸೆಟನ್ ಬಿಳಿ ಹೊಳೆಯುವ ಹರಳುಗಳ ರೂಪದಲ್ಲಿರುತ್ತದೆ. ಇದಕ್ಕೆ ಯಾವ ವಿಶಿಷ್ಟ ವಾಸನೆಯೂ ಇಲ್ಲ. ರುಚಿ ಸ್ವಲ್ಪ ಕಹಿ. ನೀರಿನಲ್ಲಿ ಸ್ವಲ್ಪವೇ ವಿಲೀನಿಸುತ್ತದೆ. 95% ಮದ್ಯಸಾರದಲ್ಲಿ ಮತ್ತು ಕ್ಲೋರೊಫಾರಮಿನಲ್ಲಿ ವಿಲೀನಿಸುತ್ತದೆ.

ಫಿನಸೆಟಿನ್ನನ್ನು ಜ್ವರದ ಉಪಶಮನಕ್ಕೂ ತಲೆನೋವು ಹಲ್ಲುನೋವು, ಸಂಧಿವಾತ ನರಗಳ ನೋವುಗಳನ್ನು ಕಡಿಮೆ ಮಾಡಲಿಕ್ಕೂ ಉಪಯೋಗಿಸುತ್ತಾರೆ. ಆದರೆ ಇದು ವಿಪರೀತ ನೋವಿನಲ್ಲಿ ಪರಿಣಾಮಕಾರಿಯಲ್ಲ. ಇದನ್ನು ಕೆಫೀನ್ ಮತ್ತು ಅಸಿಟೈಲ್ ಸೆಲಿಸಿಲಿಕ್ ಅಮ್ಲಗಳ ಜೊತೆ ಎ.ಪಿ.ಸಿ. ಮಾತ್ರೆಯಾಗಿ ಕೊಡುತ್ತಾರೆ. ಔಷಧ ಪರಿಮಾಣ ಹೆಚ್ಚಾದಾಗ ಕೆಲವು ದುಷ್ಪರಿಣಾಮಗಳುಂಟಾಗುತ್ತವೆ. ಹೊಟ್ಟೆತೊಳಸಿ ಓಕರಿಕೆ ಬರುವುದು, ವಾಂತಿ, ಭೇದಿ, ಹೊಟ್ಟೆನೋವು  ಚರ್ಮದಲ್ಲಿ ಗುಳ್ಳೆಗಳು ಇವು ಪ್ರಧಾನ ದುಷ್ಟರಿಣಾಮಗಳು. ದುಷ್ಪರಿಣಾಮಗಳು ಕಂಡುಬಂದಾಗ ಔಷದ ಪ್ರಯೋಗವನ್ನು ನಿಲ್ಲಿಸಬಿಡಬೇಕು.										(ಆರ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ